ಚಿಂಚಲ
 	ರಾಡೆನ್ಷಿಯ ಗಣದ ಚಿಂಚಿಲಿಡೀ ಕುಟುಂಬಕ್ಕೆ ಸೇರಿದ ಒಂದು ಸಸ್ತನಿ. ಚಿಂಚಿಲ ಲ್ಯಾನಿಗರ್ ಇದರ ವೈಜ್ಞಾನಿಕ ಹೆಸರು. ಪೆರು, ಚಿಲಿ, ಬೊಲೀವಿಯಗಳ ಆಂಡಿಸ್ ಪರ್ವತಗಳ ಶಿಲಾಮಯ ಬಂಜರು ಪ್ರದೇಶಗಳಲ್ಲಿ ಕಾಣ ದೊರೆಯುತ್ತದೆ. ತನ್ನ ರೇಷ್ಮೆಯಂಥ ಹಾಗೂ ಬಲು ಬೆಲೆ ಬಾಳುವಂಥ ತುಪ್ಪುಳಿನಿಂದಾಗಿ ಬಹಳ ಪ್ರಸಿದ್ಧವಾಗಿದೆ. ಗಾತ್ರದಲ್ಲೂ ಸಾಮಾನ್ಯ ಆಕಾರದಲ್ಲೂ ಅಳಿಲನ್ನು ಹೋಲುವ ಪ್ರಾಣಿಯಿದು. ತಲೆಯೂ ಸೇರಿಕೊಂಡು ಇದರ ದೇಹದ ಉದ್ದ 22-38 ಛಿm ; ಇದಕ್ಕೆ ಸುಮಾರು 7-15 ಛಿm ಉದ್ದದ ಬಾಲವೊಂದಿದೆ. ದೇಹದ ಮೇಲೆಲ್ಲ 2ಛಿm ದಪ್ಪದ ಅತ್ಯಂತ ಮೃದುವಾದ ತುಪ್ಪುಳ ಇದೆ ; ಅದರ ಬಣ್ಣ ಬೂದು ಮಿಶ್ರಿತ ಮುತ್ತಿನಂತೆ. ಹೊಟ್ಟೆ ಮಾತ್ರ ಹಳದಿಮಿಶ್ರಿತ ಬಿಳಿ. ಬಾಲದ ಮೇಲೆ ಕೊಂಚ ಒರಟಾದ ಉದ್ದ ಕೂದಲುಗಳಿವೆ. ತನ್ನ ಅಗಲವಾದ ಮೂತಿ, ದೊಡ್ಡದೊಡ್ಡ ಕಪ್ಪುಬಣ್ಣದ ಹೊಳೆಯುವ ಕಣ್ಣುಗಳು. ದೊಡ್ಡ ಕಿವಿಗಳಿಂದಾಗಿ ಚಿಂಚಿಲ ಬಲು ಮುದ್ದಾಗಿ ಕಾಣುತ್ತದೆ. ಮೂತಿಯ ಮೇಲೆ ಉದ್ದವಾದ ಹಾಗೂ ಬಿರುಸಾದ ಕೂದಲುಗಳ ಮೀಸೆಯಿದೆ. ಕೆನ್ನೆಗಳಲ್ಲಿ ಅಪೂರ್ಣಾವಸ್ಥೆಯ ಸಂಚಿಗಳಿವೆ. ಮುಂಗಾಲಿನ ಪಾದಗಳಲ್ಲಿ ತಲಾ 4 ಮತ್ತು ಹಿಂಗಾಲಿನ ಪಾದಗಳಲ್ಲಿ ತಲಾ 3 ಬೆರಳುಗಳಿವೆ.
ಚಿಂಚಿಲ ಕಲ್ಲುಬಂಡೆಗಳ ಬಿರುಕುಗಳಲ್ಲಿ, ಡೊಗರುಗಳಲ್ಲಿ ವಾಸಿಸುತ್ತದೆ. ಇದು ಸಸ್ಯಾಹಾರಿ; ಬೀಜಗಳು, ಹಣ್ಣುಗಳು, ಕಾಳು, ಸಣ್ಣಪುಟ್ಟಗಿಡಗಳ ಚಿಗುರು, ಹಾವಸೆ ಮುಂತಾದವನ್ನು ತಿಂದು ಬದುಕುತ್ತದೆ. ಹೆಣ್ಣು ಚಿಂಚಿಲ ಒಂದು ಸಲಕ್ಕೆ 2-6 ಮರಿಗಳ ಲೆಕ್ಕದಲ್ಲಿ ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತದೆ. ಗರ್ಭಾವಸ್ಥೆಯ ಅವಧಿ 110 ದಿವಸಗಳು. ಒಂದು ಗಂಡು ತನ್ನ ಜೀವಮಾನವೀಡೀ ಒಂದೇ ಒಂದು ಹೆಣ್ಣಿನೊಂದಿಗೆ ಮಾತ್ರ ಜೀವನ ಸಾಗಿಸುತ್ತದೆ. ಚಿಂಚಿಲದ ಇನ್ನೊಂದು ಸೋಜಿಗವೆಂದರೆ, ಹೆಣ್ಣು ಗಾತ್ರದಲ್ಲಿ ಗಂಡಿಗಿಂತ ದೊಡ್ಡದಿರುವುದು. ಅಂತೆಯೇ ಪ್ರಣಯಾಚರಣೆಯಲ್ಲಿ ಹೆಣ್ಣಿನದೇ ಮೇಲುಗೈ. ಮರಿಗಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಓಡಾಡತೋಡಗುವುವಲ್ಲದೆ ಘನರೂಪದ ಆಹಾರವನ್ನು ಸೇವಿಸಲೂ ಸಮರ್ಥವಾಗುವುವು. 5-8 ತಿಂಗಳಿನಲ್ಲಿ ಇವಕ್ಕೆ ಲೈಂಗಿಕ ಪ್ರಬುದ್ಧತೆ ಬರುತ್ತದೆ. ಚಿಂಚಿಲದ ಆಯಸ್ಸು ಸುಮಾರು 10 ವರ್ಷಗಳು. 
ಚಿಂಚಿಲದಲ್ಲಿ ಮೂರು ಮುಖ್ಯ ಬಗೆಗಳನ್ನು ಗುರುತಿಸಬಹುದು: 1 ಪೆರುವಿನ ಅಥವಾ ರಾಜ ಚಿಂಚಿಲ - ಪೆರು ದೇಶದ ಪರ್ವತಸೀಮೆಗಳಲ್ಲಿ ವಾಸಿಸುತ್ತದೆ. ಇದರ ತುಪ್ಪುಳು ಅತ್ಯಂತ ಉತ್ತಮವಾದುದೂ ಭಾರಿ ಬೆಲೆಯದೂ ಆಗಿದೆ. 
2ಬೊಲೀವಿಯದ ಚಿಂಚಿಲ-ಬೊಲೀವಿಯ ಮತ್ತು ಉತ್ತರ ಅರ್ಜಂಟೀನಗಳ ಆಂಡಿಸ್ ಪರ್ವತಗಳ ಪೂರ್ವದ ಇಳಿಜಾರುಗಳಲ್ಲಿ ಕಾಣಬರುತ್ತದೆ.

3 ಚಿಲಿಯ ಚಿಂಚಿಲ-ಚಿಲಿ ದೇಶದ ಪರ್ವತಗಳಲ್ಲಿ ಜೀವಿಸುತ್ತದೆ. ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ತುಪ್ಪುಳಕ್ಕೋಸ್ಕರ ಸಾಕುತ್ತಾರೆ.

ಚಿಂಚಿಲಗಳ ಬೇಟೆ ಇಂಕಾಗಳ ಕಾಲದಿಂದಲೂ ರೂಢಿಯಲ್ಲಿದೆ ಎಂದು ಹೇಳಲಾಗಿದೆ. ಚಿಂಚಿಲಗಳು ಬಲು ಚುರುಕು ಪ್ರಾಣಿಗಳಾದ್ದರಿಂದ ಇವನ್ನುಹಿಡಿಯುವುದು ಅತಿಪ್ರಯಾಸದ ಕೆಲಸ. ಆದರೂ ತುಪ್ಪಳಕ್ಕಾಗಿ ಇವನ್ನು ನೂರಾರು ವರ್ಷಗಳಿಂದ ಬೇಟೆಯಾಡುತ್ತ ಬಂದಿರುವುದರಿಂದ ಇವು ನಿರ್ವಂಶವಾಗುವ ಸ್ಥಿತಿ ಒದಗಿತ್ತು. ಆದರೆ 1920ರಿಂದೀಚೆಗೆ ಚಿಲಿ ಮುಂತಾದ ದೇಶಗಳಲ್ಲಿ ಇವುಗಳ ಬೇಟೆಯನ್ನು ನಿಷೇಧಿಸಲಾಗಿದೆ.
(ವಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ